ನಿನ್ನೆ ಸಂಜೆ ಅರಮನೆ ಮೈದಾನದಲ್ಲಿ ಪುನೀತ ಪರ್ವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರ ಗಂಧದಗುಡಿ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಾಗಿತ್ತು. ಸ್ಟಾರ್ ಕಲಾವಿದರ ಜೊತೆಗೆ ಅಭಿಮಾನಿಗಳು ಕೂಡ ಸೇರಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಪುನೀತ್ ರಾಜ್ ಕುಮಾರ್ ಅವರಿಗೆ ಎಲ್ಲರೂ ಸೇರಿ ವಿಶೇಷ ರೀತಿಯಲ್ಲಿ ವಿಭಿನ್ನವಾಗಿ ನಮನ ಸಲ್ಲಿಸಿದರು. ಭಾರತ ಸಿನಿಮಾರಂಗ ಕಲಾವಿದರೆಲ್ಲರೂ ಒಂದಾಗಿ ಸೇರಿದ್ದು ಮತ್ತೊಂದು ವಿಶೇಷ. ಪುನೀತ್ ರಾಜ್ ಕುಮಾರ್ ಅವರ ಕಾರ್ಯಕ್ರಮಕ್ಕೆ ಇಡೀ ಭಾರತೀಯರು ಸೇರಿರುವುದು ಖುಷಿಯ ಸಂಗತಿ.

ಪುನೀತ ಪರ್ವ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಸುಧಾ ಮೂರ್ತಿ ಕೂಡ ಭಾಗಿಯಾಗಿದ್ದರು. ಅನೇಕ ಕಲಾವಿದರು ಮತ್ತು ತಂತ್ರಜ್ಞರ ವೇದಿಕೆ ಮೇಲೆ ಪುನೀತ್ ರಾಜ್ ಕುಮಾರ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಪ್ರಕಾಶ್ ರೈ, ಯಶ್, ರಾಧಿಕಾ ಪಂಡಿತ್, ಸುಧಾರಾಣಿ, ವಾಸಂತಿ, ಸುಮಲತಾ, ರವಿಚಂದ್ರನ್, ರಾಜ್ ಬಿ ಶೆಟ್ಟಿ, ದುನಿಯಾ ವಿಜಯ್, ರಮ್ಯಾ ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮದಲ್ಲಿ ನೆರೆದಿದ್ದರು. ಪುನೀತ್ ಅವರ ಜನಪರ ಕಾಳಜಿಯನ್ನು ಮುಂದುವರೆಸಿಕೊಂಡು ಹೋಗುವ ಬಗ್ಗೆ ಕಲಾವಿದರು ವೇದಿಕೆಯಲ್ಲಿ ಮಾತನಾಡಿದರು.

ಈ ವೇಳೆ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು, ಒಂದು ವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ. ಅದನ್ನು ನೆನಪಿಸಿಕೊಳ್ಳುವುದೇ ಕಷ್ಟ. ನೋವಿನಲ್ಲೇ ಎಲ್ಲರೂ ಒಂದು ವರ್ಷವನ್ನು ಕಳೆದಿದ್ದಾರೆ. ಎಲ್ಲಾ ಚಿತ್ರರಂಗದವರಿಗೆ, ಅಭಿಮಾನಿಗಳಿಗೆ ಅಪ್ಪು ಇಲ್ಲದ ನೋವಿದೆ. ನಮ್ಮ ಕುಟುಂಬದ ದುಃಖದಲ್ಲಿ ನೀವೆಲ್ಲಾ ಪಾಲ್ಗೊಂಡಿದ್ದಿರಾ. ನಮಗೆ ಧೈರ್ಯ ತಂದು ಕೊಟ್ಟಿದ್ದೀರಾ. ಅಪ್ಪಾಜಿ ಹಾಗೂ ನಾನು ಗಂಧದ ಗುಡಿ ಸಿನಿಮಾ ಮಾಡಿದ್ವಿ. ಅದು ಏನೋ ನೀವೆಲ್ಲಾ ನಮ್ಮ ಕೈ ಹಿಡಿದಿದ್ದೀರಾ. ಆ ಚಿತ್ರದಲ್ಲಿ ನಾನು ಅಪ್ಪಾಜಿ ಮಗನ ಪಾತ್ರದಲ್ಲಿ ಮಾಡಿದ್ದೆ. ಈಗ ಅಪ್ಪು ಅ ಚಿತ್ರ ಮಾಡಿದ್ದು. ನಮಗೆ ಕಾಡು ಎಷ್ಟು ಮುಖ್ಯ ಅಂತ ಈ ಚಿತ್ರದಲ್ಲಿ ಅಪ್ಪು ಹೇಳಿದ್ದು, ಗಂಧದಗುಡಿ ಚಿತ್ರವನ್ನು ನೀವೆಲ್ಲಾ ನೋಡಿ ಎಂದು ಹೇಳಿದರು.