ಇತ್ತೀಚೆಗೆ ಯುವಜನತೆ ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಎಲ್ಲಾ ಪ್ರಕರಣಗಳೂ ಹೆಚ್ಚಾಗಿ ಪ್ರೀತಿ-ಪ್ರೇಮದ್ದೇ ಆಗಿರುತ್ತದೆ. ಇದರ ಜೊತೆಗೆ ಮದುವೆಯಾದ ನವದಂಪತಿಗಳಲ್ಲಿ ಬಿರುಕು ಮೂಡಿ ಯುವತಿಯರು ಸೂಸೈಡ್ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲವೂ ಮುಂದಿನ ಪೀಳಿಗೆಗೆ ಇನ್ನಷ್ಟು ಮಾರಕವಾಗಬಹುದು. ಸಣ್ಣ-ಪುಟ್ಟ ಕಾರಣಗಳಿಗೆ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ಚಿಕ್ಕ ಚಿಕ್ಕ ವಿಚಾರಕ್ಕೂ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದೆಲ್ಲಾ ಬೆಳವಣಿಗೆಗಳು ಕಂಡರೆ ಮುಂದಿನ ಪೀಳಿಗೆ ಮಕ್ಕಳಲ್ಲಿ ಮತ್ತಷ್ಟು ಮಾನಸಿಕ ಸೂಕ್ಷ್ಮತೆಗಳು ಹೆಚ್ಚಾಗಿ, ಇದರಿಂದ ಕಷ್ಟ, ಸಮಸ್ಯೆಗಳನ್ನು ಎದುರಿಸುವುದೇ ಕಷ್ಟವಾದಂತಿದೆ.

ಶಿವಮೊಗ್ಗದ ಹೊಮ್ಮರಡಿ ನರ್ಸಿಂಗ್ ಹೋಮ್ ತುಂಬಾನೇ ಫೇಮಸ್. ಜಯಶ್ರೇ ಹೊಮ್ಮರಡಿ ಅವರು ಖ್ಯಾತ ವೈದ್ಯೆ. ಇವರ ಪುತ್ರ ಆಕಾಶ್ ಹೊಮ್ಮರಡಿ ಅವರಿಗೆ ನವ್ಯಶ್ರೀ ಅವರನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಇದೇ ವರ್ಷದ ಮೇ ತಿಂಗಳಲ್ಲಿ ಆಕಾಶ್ ಹಾಗೂ ನವ್ಯಶ್ರೀ ಸಪ್ತಪದಿ ತುಳಿದಿದ್ದರು. ಆದರೆ ಮದುವೆಯಾದ ಐದೇ ತಿಂಗಳಿಗೆ ನವ್ಯಶ್ರೀ ಅವರು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಈ ವಿಚಾರ ಈಗ ಶಿವಮೊಗ್ಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ನವ್ಯಶ್ರೀ ಅವರ ಸಾವಿಗೆ ಕಾರಣವೇನು ಎಂಬುದು ಈಗ ಎಲ್ಲರಲ್ಲೂ ಮೂಡಿರುವ ಬಹುದೊಡ್ಡ ಪ್ರಶ್ನೆಯಾಗಿದೆ.

ಶನಿವಾರ ತುಳಸಿ ಹಬ್ಬ ಹಿನ್ನೆಲೆ ಪೂಜೆ ಮಾಡಿದ ನವ್ಯಶ್ರೀ ಅವರು ಅರಿಶಿನ ಕುಂಕುಮ ತೆಗೆದುಕೊಂಡಿದ್ದಾರೆ. ಬಳಿಕ ಕಾರು ಶೆಡ್ಡಿಗೆ ಹೋಗಿ ನೇಣಿಗೆ ಶರಣಾಗಿದ್ದಾರೆ. ಪೊಲೀಸರು ಬಂದು ನವ್ಯಶ್ರೀ ಅವರ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ. ಇನ್ನು ನವ್ಯಶ್ರೀ ಅವರ ತಾಯಿ ನಳಿನಿ ಮಾತನಾಡಿ, ನನ್ನ ಮಗಳ ಸಾವಿಗೆ ಆಕಾಶ್ ಮನೆಯವರೇ ಕಾರಣ ಎಂದಿದ್ದಾರೆ. ಆಕಾಶ್ ಜವಾಬ್ದಾರಿ ಇಲ್ಲದೆ, ನಿತ್ಯಾ ಮಧ್ಯರಾತ್ರಿ ಮನೆಗೆ ಬರುತ್ತಿದ್ದರಂತೆ. ಅಲ್ಲದೇ, ಕುಡಿದು ಬರುತ್ತಿದ್ದರು ಎಂದು ಹೇಳಿದ್ದಾರೆ. ಸದ್ಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.