ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕಿದ ಕಾಂತಾರ: ಭಾನುವಾರ ಒಂದೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ..?

ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಕಾಂತಾರ ಚಿತ್ರದ ಮ್ಯುಸಿಕ್ ಈಗ ಎಲ್ಲೆಡೆ ಗುನುಗುತ್ತಿದೆ. ಯಾರ ಬಾಯಲ್ಲಿ ಕೇಳಿದರೂ ಸಿಂಗಾರದ ಸಿರಿಯೇ ಹಾಡೇ ಓಡಾಡುತ್ತಿದೆ. ಇನ್ನು ಎಲ್ಲರ ಮನೆಯಲ್ಲೂ ಕಾಂತಾರ ಚಿತ್ರದ ದೈವ ಕೋಲದ ಹಾಡೇ ಬ್ಯಾಗ್ರೌಂಡ್ ಮ್ಯೂಸಿಕ್ ಕೇಳುತ್ತಿದೆ. ಇದಕ್ಕೆಲ್ಲಾ ಕಾರಣವೇನು ಎಂಬುದು ಸ್ಪಷ್ಟವಾಗಿ ಹೇಳುವುದಕ್ಕೆ ಸಾಧ್ಯವಾಗದಿದ್ದರೂ, ಭಾರತದ ಎಲ್ಲಾ ಚಿತ್ರಗಳ ದಾಖಲೆಯನ್ನು ಹಿಂದಿಕ್ಕುವಲ್ಲಿ ಮುನ್ನಡೆಯುತ್ತಿದೆ. ದಿನ ದಿನಕ್ಕೂ ಕಾಂತಾರ ಚಿತ್ರದ ಕಲೆಕ್ಷನ್ ಹೆಚ್ಚು ಹೆಚ್ಚು ಕಲೆಕ್ಷನ್ ಮಾಡುತ್ತಿದೆ.

ಕಾಂತಾರ ಚಿತ್ರವನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ ಕೂಡ. ಕಾಂತಾರ ಚಿತ್ರವನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ಈ ಚಿತ್ರವನ್ನು ನೋಡಿದವರೆಲ್ಲರೂ ಮೆಚ್ಚಿಕೊಂಡಿದ್ದಾರೆ. ಕಾಂತಾರ ಚಿತ್ರದಲ್ಲಿ ದೈವ ಕೋಲದ ಜೊತೆಗೆ ಕಂಬಳ, ಕೆಸರಿನ ಹೊಡೆದಾಟ, ಪ್ರಕೃತಿಯ ಸೊಬಗು, ಹಳ್ಳಿ ಜನರ ಮುಗ್ಧತೆ ಎಲ್ಲವೂ ಜನರನ್ನು ಖುಷಿ ನೀಡಿದೆ.

ಇವೆಲ್ಲಾ ಕಾರಣಗಳಿಂದ ಕಾಂತಾರ ಚಿತ್ರ ಕರ್ನಾಟಕದಲ್ಲಿ ಮಾತ್ರವಲ್ಲದೇ, ಎಲ್ಲೆಡೆ ಸದ್ದು ಮಾಡುತ್ತಿದೆ. ಕನ್ನಡದ ಚಿತ್ರ ಈ ಮಟ್ಟಕ್ಕೆ ಸದ್ದು ಮಾಡುತ್ತಿರುವುದಕ್ಕೆ ಚಿತ್ರತಂಡ ಸಂತಸವನ್ನೂ ವ್ಯಕ್ತ ಪಡಿಸಿದೆ. ಇನ್ನು ಚಿತ್ರ ರಿಲೀಸ್ ಆದ ಮೊದಲ ದಿನದಿಂದಲೂ ಕಲೆಕ್ಷನ್ ವಿಚಾರದಲ್ಲೀ ಕೊಂಚವೂ ಕಡಿಮೆಯಾಗಿಲ್ಲ. ಕೋಟಿ ಕೋಟಿ ಕಲೆಕ್ಷನ್ ಮಾಡಿರುವ ಕಾಂತಾರ ಚಿತ್ರ ನಿನ್ನೆ ಭಾನುವಾರವಂತೂ ಬಾಕ್ಸ್ ಆಫಿಸಿನಲ್ಲಿ ಚಿಂದಿ ಉಡಾಯಿಸಿದೆ. ಭಾನುವಾರ ಒಂದೇ ದಿನ ಕಾಂತಾರ ಚಿತ್ರ ಎಲ್ಲಾ ಭಾಷೆಗಳಿಂದ ಬರೋಬ್ಬರಿ 20 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ ನೂರು ಕೋಟಿ ಕ್ಲಬ್ ಸೇರಿದ್ದು, ಹೊಸ ದಾಖಲೆಯನ್ನು ಬರೆದಿದೆ.