ರಿಜಿಸ್ಟರ್ ಮದುವೆಯಾದ ಕಾಮಿಡಿ ಕಿಲಾಡಿ ಸಂಜು ಬಸಯ್ಯ ಮತ್ತು ಪಲ್ಲವಿ; ಈ ಜೋಡಿಯದ್ದು ಏಳೆಂಟು ವರ್ಷಗಳ ಪ್ರೀತಿ!
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ನಾಡಿನ ಮನೆಮಾತಾದ ನಟ ಸಂಜು ಬಸಯ್ಯ, ತಮ್ಮ ಹಾಸ್ಯದಿಂದಲೇ ಎಲ್ಲರ ಮನಸೆಳೆದವರು. ಕಾಮಿಡಿ ಕಿಲಾಡಿಗಳು ಮುಗಿದ ಬಳಿಕ ಸಿನಿಮಾ, ನಾಟಕ ಹೀಗೆ ಅವರ ಕಲಾ ಜರ್ನಿ ಮುಂದುವರಿಯುತ್ತಿದೆ. ಹೀಗಿರುವಾಗಲೇ ಇದೀಗ ಸದ್ದಿಲ್ಲದೆ, ತಮ್ಮ ಬಹುಕಾಲದ ಪ್ರೇಯಸಿಯನ್ನು ಮದುವೆಯಾಗಿದ್ದಾರೆ.
ಕಾಮಿಡಿ ಕಿಲಾಡಿಗಳು ಮೂಲಕವೇ ನಾಡಿನ ಜನರನ್ನು ನಗಿಸಿದವರು ನಟ ಸಂಜು ಬಸಯ್ಯ. ಉತ್ತರ ಕರ್ನಾಟಕ ಮೂಲದ ಸಂಜು, ವೃತ್ತಿ ಮತ್ತು ಪ್ರವೃತ್ತಿಯಿಂದ ನಟನೆಯನ್ನೇ ನಂಬಿದವರು. ಬೆಳಗಾವಿ ಜಿಲ್ಲೆಯ ಮುರುಗೋಡು ಗ್ರಾಮದ ಸಂಜು, ಆರಂಭದಲ್ಲಿ ನಾಟಕ ಕಂಪನಿಗಳಲ್ಲಿ ಗುರುತಿಸಿಕೊಂಡಿದ್ದರು. ಕುಳ್ಳ ಮಿಂಡ್ರಿ, ಮೆಣಸಿನಕಾಯಿ ಬಸ್ಯಾ, ಸಂಜು ಬಸಯ್ಯ ಹೀಗೆ ಹಲವು ಹೆಸರುಗಳಿಂದಲೇ ಇವರು ಫೇಮಸ್.
ಉತ್ತರ ಕರ್ನಾಟಕ ಭಾಗದಲ್ಲಿ ನಾಟಕಗಳಲ್ಲಿ, ವೇದಿಕೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಸಂಜು ಬಸಯ್ಯ ಇತ್ತೀಚೆಗಷ್ಟೇ ರಿಜಿಸ್ಟರ್ ಮದುವೆಯಾಗಿದ್ದಾರೆ.ಅಂದಹಾಗೆ, ಸಂಜು ಅವರು ಮದುವೆ ಆಗಿದ್ದು ನಟಿ ಪಲ್ಲವಿ ಬಳ್ಳಾರಿ ಎಂಬುವವರನ್ನು. ನಾಟಕ ಕಲಾವಿದೆಯಾಗಿರುವ ಪಲ್ಲವಿ, ಮಲ್ಲು ಜಮಖಂಡಿ, ಶಿವಪುತ್ರ ಯಶಾರದಾ ಸೇರಿ ಹಲವು ಯೂಟ್ಯೂಬರ್‌ಗಳ ಕಿರು ಚಿತ್ರಗಳಲ್ಲಿ ನಟಿಸಿದ್ದಾರೆ.
ಕಳೆದ ಏಳೆಂಟು ವರ್ಷಗಳ ಹಿಂದೆಯೇ ಸಂಜು ಬಸಯ್ಯ ಮತ್ತು ಪಲ್ಲವಿ ಅವರ ಪರಿಚಯವಾಗಿತ್ತು. ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಸದ್ಯ ರಿಜಿಸ್ಟರ್ ಮದುವೆ ಆಗಿರುವ ಈ ಜೋಡಿ ಮುಂದಿನ ದಿನಗಳಲ್ಲಿ ಸಪ್ತಪದಿ ತುಳಿಯಲಿದೆ. ಈ ವಿಚಾರವನ್ನು ಇತ್ತೀಚೆಗಷ್ಟೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ಪೋಸ್ಟ್ ಮಾಡಿ ಎಲ್ಲರಿಂದಲೂ ಆಶೀರ್ವಾದ ಪಡೆದುಕೊಂಡಿದ್ದಾರೆ.
ಕನ್ನಡದ ಕಲಾಭಿಮಾನಿಗಳಿಗೆ ನಿಮ್ಮ ಪ್ರೀತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಮಾಡುವ ಅನಂತ ಕೋಟಿ ನಮಸ್ಕಾರಗಳು. ಇಲ್ಲಿಯವರೆಗಿನ ನನ್ನ ಹಾಗೂ ಪಲ್ಲವಿ ಬಳ್ಳಾರಿಯವರ ನಡುವಿನ ಸಂಬಂಧಗಳ ಊಹಾಪೋಹಗಳಿಗೆ ಇಂದು ನಾವು ತೆರೆ ಎಳೆದಿದ್ದೆವೆ. ಮೊದಲಿಗೆ ನಮ್ಮಿಬ್ಬರ ಪರಿಚಯವಾಗಿತು, ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿದ್ದ ವಿಷಯ. ಈಗ ನಾವಿಬ್ಬರು ಕಾನೂನಬದ್ದವಾಗಿ, ಅಧಿಕೃತವಾಗಿ, ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ.